Sep 29, 2012

ಆದರ್ಶವೇ ಬೆನ್ನು ಹತ್ತಿ . . . ಭಾಗ 7


ಆದರ್ಶವೇ ಬೆನ್ನು ಹತ್ತಿ . . . ಭಾಗ 6

ಶಿವಶಂಕರ್ ಅಳುತ್ತಿದ್ದರು.

ವಿಕ್ರಮ್ ಯಾರು? ಎಂಬ ಯೋಚನೆಯಲ್ಲಿ ಅರ್ಧ ಜೀವನವೇ ಕಣ್ಮುಂದೆ ಸುಳಿದು ಹೋಯ್ತಲ್ಲ ಎಂದು ಅಚ್ಚರಿಗೊಳ್ಳುತ್ತ ವಾಸ್ತವಕ್ಕೆ ಬಂದನು ಲೋಕೇಶ್. ತಂದೆಯೆಡೆಗೆ ನೋಡಿದ. ಅಳುತ್ತಿದ್ದರು. ಭಯ ಗೊಂದಲ ಉಂಟಾಯಿತು. ನಾನೇ ಒಳಗೆ ಹೋಗಲಾ? ವಿಜಿ ಏನು ಮಾಡಿರಬಹುದು? ಕಳ್ಳತನ? ಅಥವಾ ಅವನಿಗೇನಾದ್ರೂ . . .ಛೀ ಕೆಟ್ಟದನ್ಯಾಕೆ ಯೋಚಿಸಬೇಕು. ವಿಕ್ರಮ್ ಹೊರಬಂದರು.

“ಬನ್ನಿ ಲೋಕೇಶ್, ನಿಮ್ಮೊಡನೆ ಸ್ವಲ್ಪ ಮಾತನಾಡಬೇಕಿತ್ತು” ಎಂದ್ಹೇಳಿ ಲೋಕಿಯನ್ನು ಕರೆದುಕೊಂಡು ಹೊರಗೆ ಬಂದ.

“ನೋಡು ಲೋಕಿ. ನಾನೀಗ ಹೇಳೋ ವಿಷಯದಿಂದ ನಿನಗೆ ತುಂಬಾ ಕೋಪ ಬರುತ್ತೆ ಅಂಥ ಗೊತ್ತು ನನಗೆ. ಕೋಪದಿಂದ ಏನೂ ಸಾಧಿಸೋದಿಕ್ಕಾಗೋದಿಲ್ಲ ಅನ್ನೋದು ಕಾಂತರಾಜ್ ವಿಷಯದಲ್ಲೇ ನಿನಗೆ ಗೊತ್ತಾಗಿರಬೇಕು”

“ಮುಂಚಿನಷ್ಟು ಕೋಪ ಬರೋಲ್ಲ ಸರ್ ಈಗ”

“ಗುಡ್ . . .ಈ ಹೋಮೋಸೆಕ್ಸ್ . . .ಅಂದ್ರೆ ಸಲಿಂಗಕಾಮಿಗಳ ಬಗ್ಗೆ . . .”

“ವಿಜಿ ಏನಾದ್ರೂ ಸಲಿಂಗಕಾಮಿ?”

“ಹಾಗಲ್ಲ. ನಿನ್ನೆ ಸಂಜೆ ಏನಾಗಿದೆ ಅಂದ್ರೆ ಈ ಸಂಸ್ಥೆಯ ಲೈಬ್ರರಿಯಲ್ಲಿ ಕೆಲಸ ಮಾಡ್ತಿರೋ ವ್ಯಕ್ತಿಯೊಬ್ಬ ನಿನ್ನ ತಮ್ಮನನ್ನು ಸಲಿಂಗಕಾಮಕ್ಕೆ ಹೆದರಿಸಿ ಬೆದರಿಸಿ ಬಳಸಿಕೊಂಡಿದ್ದಾನೆ. ಆ ಶಾಕಿನಿಂದ ವಿಜಯ್ ಗೆ ಪ್ರಜ್ಞೆ ತಪ್ಪಿದ ಹಾಗೆ ಆಗಿದೆ. ಗಾಬರಿಪಡುವಂಥದ್ದೇನಿಲ್ಲ. . .ಈಗಾತ ಹುಷಾರಾಗಿದ್ದಾನೆ ಅಂತ ಡಾಕ್ಟರ್ ಫೋನಿನಲ್ಲಿ ಹೇಳಿದರು”. ಕ್ಷಣದ ಮಟ್ಟಿಗೆ ವಿಕ್ರಮ್ ಏನು ಹೇಳ್ತಾ ಇದ್ದಾರೇಂತ ಲೋಕಿಗೆ ತಿಳಿಯಲಿಲ್ಲ. ಕಣ್ಣು ಮುಚ್ಚಿ ಆತ ಹೇಳಿದ್ದನ್ನಲ್ಲಾ ಮನನ ಮಾಡುತ್ತಾ ಅರ್ಥೈಸಿಕೊಂಡನು.

“ವಿಜಿ ಜೀವಕ್ಕೇನೂ ಅಪಾಯವಿಲ್ಲವಾ?”

“ಇಲ್ಲ”

“ಆ ನೌಕರ ಎಲ್ಲಿದ್ದಾನೆ ತೋರಿಸಿ ಸರ್”

ಲೋಕಿಯ ಕೈಯಿಡಿದು “ಲೋಕಿ ಆಗಲೇ ಹೇಳಿದ್ದೀನಿ ಕೋಪದಿಂದ ಏನನ್ನೂ. . .”

“ಸರಿ ಸರಿ. ಅವನನ್ನು ಅರೆಸ್ಟ್ ಮಾಡಿದ್ದೀರಾ?”

“ಇಲ್ಲ”

“ಇಲ್ಲಾ!!?”

“ಯಾರೂ ಇನ್ನೂ ಕಂಪ್ಲೇಂಟ್ ಕೊಟ್ಟಿಲ್ಲ”

“ಮತ್ತೆ ನಿಮಗೆ ವಿಷಯ ಹೇಗೆ ತಿಳೀತು?”

“ಯಾರೋ ಫೋನ್ ಮಾಡಿದ್ದರು. ಹೆಸರು ತಿಳಿಸಲಿಲ್ಲ”

“ಸರಿ. ನಾನು ಕಂಪ್ಲೇಂಟ್ ಕೊಡ್ತೀನಿ”

“ಅದರ ಬಗ್ಗೆ ಮಾತನಾಡೋದಿಕ್ಕೇ ಕರೆದದ್ದು” ತಲೆತಗ್ಗಿಸಿ ಹೇಳಿದರು ವಿಕ್ರಮ್. ಮೊದಲಬಾರಿಗೆ ಮನಸ್ಸಾಕ್ಷಿಗೆ ವಿರುದ್ಧವಾಗಿ ಹೋಗಬೇಕಾದ ಪರಿಸ್ಥಿತಿ ಬಂತಲ್ಲ ಎಂದವರಲ್ಲಿ ಪಶ್ಚಾತಾಪವಿತ್ತು.

“ನಿನಗೆ ಗೊತ್ತೋ ಇಲ್ವೋ ಈ ಸಂಸ್ಥೆ ಶುರುವಾಗಿ ಇಪ್ಪತ್ತೈದು ವರ್ಷಗಳಾಗಿವೆ. ಇಂದಿನವರೆಗೂ ಈ ಸಂಸ್ಥೆ ಯಾವುದೇ ಕೆಟ್ಟ ಹೆಸರು ಪಡೆದಿಲ್ಲ”

“ಅದಿಕ್ಕೆ?! ನನ್ನ ತಮ್ಮನಿಗೆ ಇಷ್ಟೆಲ್ಲಾ ಅನ್ಯಾಯವಾಗಿದ್ದರೂ ಅದೆಲ್ಲೂ ಬಹಿರಂಗವಾಗಬಾರದು ಅಂತ ತಾನೇ ನಿಮ್ಮ ಅಭಿಪ್ರಾಯ?”. ವಿಕ್ರಮ್ ಕಣ್ಣು ನೆಲದತ್ತ ಬಾಗಿದವು, ಸಮ್ಮತಿ ಸೂಚಿಸುತ್ತ. 

“ನಿಮ್ಮ ಬಗ್ಗೆ ಎಷ್ಟು ಗೌರವವಿತ್ತು ಗೊತ್ತಾ. . .ನೀವೂ ಈ ರೀತಿಯಾಗಿ ಮಾತನಾಡಬಲ್ಲಿರಿ . . . ಅದೆಲ್ಲ ಬಿಡಿ. ನಾನು ಕಂಪ್ಲೇಂಟ್ ಕೊಟ್ಟೇ ಕೊಡ್ತೀನಿ. ಅವನಿಗೆ ಶಿಕ್ಷೆಯಾಗುವವರೆಗೂ ಸುಮ್ಮನಿರೋಲ್ಲ”

“ನಿನ್ನ ನೋವು ನನಗೂ ಅರ್ಥ ಆಗುತ್ತೆ. ಮನೆಯವರನ್ನೆಲ್ಲಾ ಬಿಟ್ಟು ಬಂದು ಓದುತ್ತಿರುವವರ ಮೇಲೆ ಈ ರೀತಿಯ ದೌರ್ಜನ್ಯ ಎಸೆದವನನ್ನು ನೇಣಿಗೆ ಹಾಕಬೇಕು ಅನ್ನಿಸುತ್ತೆ. ಕಂಪ್ಲೇಂಟ್ ತೆಗೆದುಕೊಂಡು ಆತನನ್ನು ಬಂಧಿಸಿದರೆ ಸಂಸ್ಥೆಗೆ ಕೆಟ್ಟ ಹೆಸರು. ಮಿಕ್ಕವರೂ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿಬಿಡುತ್ತಾರೆ. ಆದ್ದರಿಂದ ಆ ನೌಕರನ ಮೇಲೆ ಯಾವ ಕೇಸೂ ಬೇಡ. ಕೆಲಸದಿಂದ ಬಿಡಿಸಿ ನಾಲ್ಕು ಒದ್ದು ಕಳಿಸಿ ಅಂತ ಮೇಲಿನಿಂದ ಆದೇಶ ಬಂದಿದೆ ನನಗೆ”

“ಮೇಲಿನಿಂದ ಅಂದ್ರೆ?”

“ಮೇಲಧಿಕಾರಿ”

“ಅವರಿಗೂ ಇದಕ್ಕೂ ಏನು ಸಂಬಂಧ?”

“ಆ ಅಧಿಕಾರಿ ಈ ನೆಹರೂ ಸಂಸ್ಥೆಯ ಟ್ರಸ್ಟಿಯೊಬ್ಬರ ನೇರ ಸಂಬಂಧಿ. ಇಲ್ಲಿಯ ಆಗುಹೋಗುಗಳನ್ನೆಲ್ಲ ಗಮನಿಸುತ್ತಿರುತ್ತಾರೆ”

“ಅದೆಲ್ಲ ಬಿಟ್ಬಿಡಿ ಸರ್. ನಾನು ಕಂಪ್ಲೇಂಟ್ ಕೊಡ್ತೀನಿ. ನಿಮ್ಮ ಪ್ರಾಮಾಣಿಕತೆ ಬಗ್ಗೆ ನನಗೆ ಸಂಶಯವಿಲ್ಲ. ನೀವು ಕೇಸ್ ಫೈಲ್ ಮಾಡಿ”

ಬೇಸರದ ನಗೆ ನಕ್ಕು “ಪೋಲೀಸ್ ಇಲಾಖೆಯಲ್ಲಿ ಕೇಸ್ ಹೇಗೆ ಮುಂದಕ್ಕೋಗುತ್ತೆ, ನಮ್ಮ ದೇಶದ ಕಾನೂನಿನಿಂದ ಒಂದು ಅಪರಾಧಾನ ಹೇಗೆ ಮುಚ್ಚಿಬಿಡಬಹುದು ಅನ್ನೋದು ನಿನಗೆ ತಿಳಿದಿಲ್ಲ. ನಾನು ಆ ನೌಕರನ ಮೇಲೆ ಕೇಸ್ ಹಾಕಿದೆ ಅಂತ ಇಟ್ಕೋ. ವಿಚಾರಣೆ ಆರಂಭವಾಗುವುದಕ್ಕೂ ಮುಂಚೇನೆ ನನ್ನ ವರ್ಗಾವಣೆಯಾಗಿರುತ್ತೆ. ಅವರ ಕಡೆಯ ಮನುಷ್ಯ ನನ್ನ ಜಾಗಕ್ಕೆ ಬರ್ತಾನೆ. ‘ವಿಜಿಯ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳಾಗಿಲ್ಲ ಅಂತ ಡಾಕ್ಟರ್ ಹೇಳಿದರೆ ಮುಗೀತು ಕೇಸ್ ಹಳ್ಳ ಸೇರುತ್ತೆ” ಒಂದು ಕ್ಷಣ ಕಣ್ಣು ಮುಚ್ಚಿದರು, ತನ್ನ ಮೇಲೆಯೇ ಬೇಸರವಾಗುತ್ತಿತ್ತು. ನಿಡುಸುಯ್ದು “ಬೇಸರ ಬಿಡು ಲೋಕಿ. ಆ ನೌಕರನನ್ನು ಕೆಲಸದಿಂದ ತೆಗಿಸೋಣ. ನಿನ್ನ ತಮ್ಮನಿಗೆ ಸಂಸ್ಥೆಯ ವತಿಯಿಂದ ಪರಿಹಾರ ಕೊಡಿಸೋಣ”.

“ಹಣ ಕೊಟ್ಟಾಕ್ಷಣ ನನ್ನ ತಮ್ಮನಿಗಾದ ಅನ್ಯಾಯ ಸರಿಹೋಗುತ್ತಾ?” ಲೋಕಿಯ ಕಣ್ಣಾಲಿಗಳು ತುಂಬಿಬಂದಿದ್ದವು. ಏನು ಉತ್ತರಿಸಬೇಕೆಂದು ತಿಳಿಯದೆ ವಿಕ್ರಮ್ ಸುಮ್ಮನೆ ನಿಂತಿದ್ದ. ಅವನ ಅಸಹಾಯಕತೆಗೆ ಸಹಾಯ ಮಾಡುವವರಂತೆ ಪ್ರಿನ್ಸಿಪಾಲರು ಶಿವಶಂಕರರೊಡನೆ ಹೊರ ಬಂದರು. ಲೋಕಿ ಅವರನ್ನುದ್ದೇಶಿಸಿ “ನೋಡಿ ಪ್ರಿನ್ಸಿಪಾಲ್ ಸರ್. ನಿಮ್ಮ ಸಂಸ್ಥೆಯ ಹೆಸರು ಉಳಿಸುವುದಕ್ಕೋಸ್ಕರ ನೀವು ಈ ಕೇಸನ್ನು ಹಳ್ಳ ಹಿಡಿಸಲು ನಿರ್ಧರಿಸಿರಬಹುದು. ಪತ್ರಿಕೆಗಳ ಮುಖಾಂತರ ಈ ವಿಷಯವನ್ನು ಎಲ್ಲರಿಗೂ ತಿಳಿಸುತ್ತೇನೆ”

“ಲೋಕಿ ನೀನು ಸುಮ್ನಿರು. ಏನೋ ಆಗಿದ್ದು ಆಯ್ತು. ಅದನ್ನೇ ದೊಡ್ಡದನ್ನಾಗಿ ಮಾಡೋದು ಬೇಡ. ಸಾಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರೆಲ್ಲ ಇಲ್ಲಿ ಟ್ರಸ್ಟಿಗಳಾಗಿದ್ದಾರೆ. ಅವರನ್ನು ಎದುರು ಹಾಕಿಕೊಂಡ ಬದುಕಲಾಗುತ್ತಾ? ವಿಜಯ್ ನ ಓದಿನ ಸಂಪೂರ್ಣ ಖರ್ಚನ್ನು ಇವರೇ ವಹಿಸಿಕೊಳ್ಳುತ್ತಾರಂತೆ. ಪರಿಹಾರ ಅಂತ ಹತ್ತು ಲಕ್ಷ ಕೊಡುತ್ತಾರಂತೆ”

“ಪರಿಹಾರ ಅಲ್ಲ ಅದು. ಬಾಯ್ಮುಚ್ಕೊಂಡು ಕೂತ್ಕೊಳ್ರೋ ಬಾಡ್ಕೋವ್ ಅಂತ ಕೊಡ್ತಿರೋದು”

“ನೋಡಿ ಮಿ. ಲೋಕೇಶ್. ನಾವು ಬರೀ ನಮ್ಮ ಸಂಸ್ಥೆಯ ಹಿತದೃಷ್ಟಿಯಿಂದಷ್ಟೇ ಹೇಳುತ್ತಿದ್ದೇವೆ ಎಂದು ಭಾವಿಸಬೇಡಿ. ನಮ್ಮ ಸಂಸ್ಥೆಯ ಹೆಸರಿನ ಜೊತೆಗೆ ನಿಮ್ಮ ತಮ್ಮನ ಹೆಸರೂ ಪತ್ರಿಕೆಗಳಲ್ಲಿ ಬರುತ್ತೆ. ಪತ್ರಕರ್ತರು ಸಾವಿರ ಪ್ರಶ್ನೆ ಕೇಳ್ತಾರೆ. ಮೊದಲೇ ನೊಂದುಬೆಂದಿರೋ ನಿಮ್ಮ ತಮ್ಮನಿಗೆ ಮತ್ತಷ್ಟು ಘಾಸಿಗೊಳಿಸುವುದು ತಪ್ಪಲ್ಲವಾ?” ಕರುಣಾರಸಭರಿತವಾಗಿ ಹೇಳಿದರು ಪ್ರಿನ್ಸಿಪಾಲರು.

ಶಿವಶಂಕರ್ ಲೋಕಿಯ ಕೈಹಿಡಿದುಕೊಳ್ಳುತ್ತಾ “ಇಷ್ಟಲ್ಲ ಹೇಳಿದ ಮೇಲೂ ನಿನ್ನ ಹಟಾನೇ ದೊಡ್ಡದು ಅಂತ ನಿನಗನ್ನಿಸಿದರೆ ನಾನಂತೂ ಬದುಕಿರೋದಿಲ್ಲ” ತಂದೆಯ ಕೈಯನ್ನು ದೂರ ತಳ್ಳುತ್ತಾ ಹೊರಗೆ ಹೋದ. ವಿಕ್ರಮ್ ಲೋಕಿಯ ಹಿಂದೆ ಹೋಗಿ “ಸಾರಿ ಲೋಕಿ. ನಾನು ಅಸಹಾಯಕ. ಕ್ಷಮಿಸಿಬಿಡು”. 

“ಬಿಡಿ ಸರ್. ಅಪ್ಪ ಅನ್ನಿಸಿಕೊಂಡೋರಿಗೇ ಮಗನ ಕಾಳಜಿಯಿಲ್ಲ. ಇನ್ನು ನೀವ್ಯಾಕೆ ಬೇಸರ ಪಟ್ಟುಕೋತೀರ” ಎಂದು ಹೇಳಿದ. ನಂತರ ಮತ್ತೆ ಬಾಗಿಲಿನೆಡೆಗೆ ತಿರುಗಿ “ಕೊನೇ ಪಕ್ಷ ಅವರು ಬಿಸಾಕೋ ಹಣದ ಭಿಕ್ಷೆಯನ್ನಾದರೂ ತಿರಸ್ಕರಿಸುವಂತೆ ಹೇಳಿ ಆ ದೊಡ್ಡ ಮನುಷ್ಯನಿಗೆ” ತಂದೆಗೆ ಕೇಳಿಸುವಂತೆ ಜೋರಾಗಿ ಹೇಳಿದ.

“ಸಮಾಧಾನ ಲೋಕಿ. ಕಾಳಜಿಯಿಲ್ಲದೆ ಅವರು ಹಾಗೆ ವರ್ತಿಸುತ್ತಿಲ್ಲ. ನಿನಗಿಂತ ಹೆಚ್ಚು ಬದುಕು ನೋಡಿದ್ದಾರೆ. ದೊಡ್ಡ ಜನಗಳನ್ನು ಎದುರು ಹಾಕಿಕೊಂಡು ಉಳಿದಿಡೀ ಜೀವನವನ್ನು ನರಕ ಮಾಡಿಕೊಳ್ಳೋದು ಬೇಡ ಅಂತ ಈ ತೀರ್ಮಾನ ತೆಗೆದುಕೊಂಡಿದ್ದಾರೆ ಅಷ್ಟೇ”

“ಎಲ್ಲ ಬುದ್ಧಿ ಹೇಳೋರೇ ಆಗೋದ್ರೂ. ಕಂಡಿದ್ದೀನಿ ಹೋಗ್ರೀ. ಎಲ್ಲರೂ ಹಂಗೇ ಅಂದುಕೊಂಡಿದ್ದರೆ ಇನ್ನೂ ಬ್ರಿಟೀಷರ ಬೂಟು ನೆಕ್ಕಬೇಕಿತ್ತು ನಾವು. ಹೋಗಿ ಹೋಗಿ. ನಿಮಗೂ ಏನಾದ್ರೂ ಪಾಲು ಸಿಗಬಹುದೇನೋ ಹೋಗಿ ತಕ್ಕೊಳ್ಳಿ” ವಿಕ್ರಮ್ ಗೆ ಏನು ಹೇಳಬೇಕೆಂದು ತೋಚಲಿಲ್ಲ. ಸಮಾಧಾನ ಮಾಡಿಕೋ ಎಂಬಂತೆ ಲೋಕಿಯ ಬೆನ್ನು ಸವರಿ ಒಳನಡೆದರು.

ಲೋಕಿ ಏಕಾಂಗಿಯಾಗಿ ನಿಂತಿದ್ದ.
* * * * *  
ಲೋಕಿ ತನ್ನ ತಂದೆಯೊಡನೆ ಕೆ ಆರ್ ಆಸ್ಪತ್ರೆ ತಲುಪಿದಾಗ ಘಂಟೆ ಹತ್ತಾಗಿತ್ತು. ತುರ್ತು ಚಿಕಿತ್ಸಾ ವಿಭಾಗದತ್ತ ಹೋದರು. ಬಾಗಿಲಿನ ಎದುರಿಗಿನ ಬೋರ್ಡಿನ ಮೇಲೆ ‘ಆಸ್ಪತ್ರೆಯ ಸಿಬ್ಬಂದಿ ದುಡ್ಡು ಕೇಳಿದರೆ ಮೇಲಧಿಕಾರಿಗಳಿಗೆ ದೂರು ಕೊಡಿ’ ಎಂದು ಬರೆದಿತ್ತು. ಅನಾಮಿಕನ್ಯಾರೋ ‘ದೂರು’ ಪದವನ್ನು ಅಳಿಸಿಹಾಕಿದ್ದ!!

ಮುಂದುವರೆಯುವುದು....

No comments:

Post a Comment