Jan 25, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 16

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ....ಭಾಗ 15 ಓದಲು ಇಲ್ಲಿ ಕ್ಲಿಕ್ಕಿಸಿ

ಇದ್ದಕ್ಕಿದ್ದಂತೆ ‘ಹುಚ್ಚ’ ತನ್ನನ್ನು ಮಾತನಾಡಿಸಿದ್ದು, ಅದೂ ತನ್ನ ಹೆಸರು ಹಿಡಿದು ಕರೆದದ್ದು – ಲೋಕಿ ಗರಬಡಿದವನಂತೆ ನಿಂತುಬಿಟ್ಟ. ‘ಹುಚ್ಚ’ ಪುಸ್ತಕ ಹುಡುಕುವುದರಲ್ಲೇ ತೊಡಗಿದ್ದ.
 ಕೆಲಕ್ಷಣಗಳ ಮೌನದ ನಂತರ ಲೋಕಿ ಸಾವರಿಸಿಕೊಂಡು
“ನನ್ನ ಹೆಸರು ನಿಮಗೆ ಹೇಗೆ ಗೊತ್ತಾಯ್ತು?”
“ಬರೀ ನಿನ್ನ ಹೆಸರೇ ಅಲ್ಲ, ನಿನ್ನ ಎಲ್ಲಾ ವಿಷಯವೂ ಗೊತ್ತು”
“ಎಲ್ಲಾ ವಿಷಯ ಅಂದ್ರೆ?”
“ನಿನ್ನ ಮನೆಯವರ ಬಗ್ಗೆ, ಕಾಲೇಜಿನ ಬಗ್ಗೆ, ಕಾಂತರಾಜರ ವಿಷಯದಲ್ಲಿ ನೀನು ನಡೆದುಕೊಂಡಿದ್ದು, ಪೂರ್ಣಿಮಾಳ ಬಗ್ಗೆ...”
ಆತನ ಮಾತು ಮುಗಿಯುವಷ್ಟರಲ್ಲಿ ಮೂಲೆಯಲ್ಲಿದ್ದ ವ್ಯಕ್ತಿ ಕೆಮ್ಮಿದ. ಯಾರೋ ಅತ್ತ ಕಡೆಯೇ ಬರುತ್ತಿದ್ದಾರೆಂಬುದಕ್ಕೆ ಸೂಚನೆ. ಬರುತ್ತಿದ್ದವರನ್ನು ನೋಡಿ ಆತನ ಮುಖದಲ್ಲಿ ಬೇಸರ ಮೂಡಿತು. ಬಂದವಳು ಪೂರ್ಣಿಮಾ!
ಪೂರ್ಣಿಮಾ ಲೋಕಿಯ ಕಡೆ ಬರುತ್ತಿದ್ದಾಗ ‘ಹುಚ್ಚ’ ನಿನ್ನನ್ನು ನಂತರ ಭೇಟಿಯಾಗ್ತೀನಿ ಎಂದು ಮೆಲುದನಿಯಲ್ಲಿ ಹೇಳಿ ಹೊರಟುಹೋದ. ಆತ ಹೋಗುವುದನ್ನೇ ಕಾಯುತ್ತಿದ್ದವರಂತೆ ಆ ಇಬ್ಬರೂ ವ್ಯಕ್ತಿಗಳೂ ಹೊರಟುಹೋದರು. ಅವರು ಹೋಗುವಾಗ ಲೋಕಿಯ ಗಮನ ಅವರೆಡೆಗೆ ಹೋಯಿತು. ‘ಇವರೀರ್ವರನ್ನೂ ನಮ್ಮ ಮನೆಯ ಹತ್ತಿರ ನೋಡಿರುವ ಹಾಗಿದೆಯಲ್ವಾ?’ ಅನ್ನಿಸಿತು.
ಪೂರ್ಣಿಮಾ ಲೋಕಿಯ ಬಳಿ ಬಂದು
“ಕಾಲೇಜು ಬಿಟ್ಟು ಇಲ್ಲಿಗೆ ಬಂದಿದ್ದೀಯಲ್ಲಾ ಲೋಕಿ. ಕಾಲೇಜೆಲ್ಲ ನಿನ್ನನ್ನು ಹುಡುಕಿ ಹುಡುಕಿ ಸಾಕಾಯ್ತು”
‘ಹುಚ್ಚ’ನೊಡನೆ ಮಾತನಾಡುವ ಸಂದರ್ಭ ಒದಗಿ ಬಂದ ಸಮಯದಲ್ಲಿ ಈಕೆ ಬಂದದ್ದು ಬೇಸರವಾದರೂ ಹೆಚ್ಚು ತೋರ್ಪಡಿಸಿಕೊಳ್ಳದೆ ನಗುತ್ತಾ “ಇವತ್ತು ಮಧ್ಯಾಹ್ನ ಇದ್ದಿದ್ದೇ ಒಂದು ಕ್ಲಾಸ್ ಅಲ್ವಾ. ಅದಕ್ಕೆ ಬಂದುಬಿಟ್ಟೆ”
“ಹೌದಾ. ಸರಿ. ಲೋಕಿ ಇಂದು ಕಾಲೇಜಿನಲ್ಲಿ ಒಂದು ಮುಖ್ಯವಾದ ವಿಷಯ ನಡೆಯಿತು. ಅದನ್ನೇ ಹೇಳೋಣ ಅಂತ ಬಂದೆ”
‘ಏನು?’ ಎಂದು ಲೋಕಿ ಕೇಳುವಷ್ಟರಲ್ಲಿ ಗೃಂಥಾಲಯದ ಸಿಬ್ಬಂದಿಯೊಬ್ಬರು “ಮಾತನಾಡೋದಿದ್ದರೆ ಹೊರಗೆ ಹೋಗಿ. ನಿಮ್ಮ ಹರಟೆಯಿಂದ ಓದುವವರಿಗೆ ತೊಂದರೆಯಾಗುತ್ತೆ” ರೇಗಿದರು.
ಇಬ್ಬರೂ ಗೃಂಥಾಲಯದಿಂದ ಹೊರ ಬಂದರು. ‘ಹುಚ್ಚ’ ನನ್ನ ಕಡೆ ನೋಡ್ತಾ ಇದ್ದಾನಾ? ಎನ್ನಿಸಿ ಅವನೆಡೆಗೆ ನೋಡಿದ ಲೋಕಿ. ‘ಹುಚ್ಚ’ ಪುಸ್ತಕ ಓದುವುದರಲ್ಲಿ ಮಗ್ನನಾಗಿದ್ದ. ಆದರೆ ಆ ‘ಹುಚ್ಚ’ ಕುಳಿತಿದ್ದ ಟೇಬಲ್ಲಿನ ಪಕ್ಕದಲ್ಲಿ ಕುಳಿತಿದ್ದ ಆ ಇಬ್ಬರು ತನ್ನನ್ನೇ ದೃಷ್ಟಿಸುತ್ತಿರುವುದು ಗಮನಕ್ಕೆ ಬಂತು.
ಲೋಕಿ ಪೂರ್ಣಿಮಾಳೊಡನೆ ಗೃಂಥಾಲಯದ ಹತ್ತಿರವೇ ಇದ್ದ ಒಂದು ಪುಟ್ಟ ಹೋಟೆಲ್ಲಿಗೆ ಹೋದನು. “ಏನು ಪೂರ್ಣಿ ಸಮಾಚಾರ?”
“ಆ ಮುಖ್ಯ ವಿಷಯಕ್ಕೂ ಮುಂಚೆ ಇನ್ನೊಂದು ವಿಷಯ. ಮುಂದಿನ ತಿಂಗಳು ನಮ್ಮ ಕ್ಲಾಸಿನವರೆಲ್ಲ ಟೂರ್ ಹೋಗೋಣ ಅಂತ”
“ಇವತ್ತಾಗಲೇ ಇಪ್ಪತ್ತೆಂಟು. ಮುಂದಿನ ತಿಂಗಳು ಅಂದರೆ ಯಾವಾಗ?”
“ಏಳನೇ ತಾರೀಖು ಹೊರಡೋದು, ರಾತ್ರಿ. ಎಂಟು, ಒಂಭತ್ತು ನೋಡಬೇಕಾದ ಸ್ಥಳಗಳನ್ನೆಲ್ಲಾ ನೋಡಿಕೊಂಡು ಒಂಭತ್ತರ ರಾತ್ರಿ ಮೈಸೂರಿಗೆ ಮರಳಿ ಬರೋದು”
“ನೀನೂ ಹೋಗ್ತಾ ಇದ್ದೀಯಾ?”
“ನೀನೂ ಹೋಗ್ತಾ ಇದ್ದೀಯಾ??!! ಅಂದ್ರೆ!?! ನೀನು ಬರೋದಿಲ್ವ”
“ನನಗಿಷ್ಟವಾಗಲ್ಲ ಪೂರ್ಣಿಮಾ. ಬರೋದಿಲ್ಲ”
“ನೀನು ಗ್ಯಾರಂಟಿ ಬರ್ತೀಯ ಅಂತ ನಿನ್ನ ಹೆಸರನ್ನು ಬರೆಸಿಬಿಟ್ಟಿದ್ದೀನಿ” ಪೂರ್ಣಿಮಾಳ ಮುಖ ಕಳಾಹೀನವಾಹಿತು.
“ಹೋಗ್ಲಿ. ಬೇಸರ ಪಟ್ಟುಕೋಬೇಡ ಪೂರ್ಣಿ. ಮನೇಲಿ ಕೇಳಿಬಿಟ್ಟು ನಾಳೆ ಹೇಳ್ತೀನಿ, ಸರೀನಾ”
“ಆಯ್ತು”
“ಯಾವ ಊರಿಗೆ ಹೋಗೋದು ಅಂತ ನಿಶ್ಚಯ ಮಾಡಿದ್ದೀರಾ?”
“ಶಿವಮೊಗ್ಗ ಮತ್ತದರ ಸುತ್ತಮುತ್ತಲಿನ ಜಾಗಗಳು ಅಂತ ಅಂದುಕೊಂಡಿದ್ದೀವಿ. ಇನ್ನೂ ಫೈನಲೈಸ್ ಆಗಿಲ್ಲ”
“ಸರಿ” ಎಂದು ಲೋಕಿ ಸುಮ್ಮನಾದ. ಈತ ಬಹುಶಃ ಬರೋದಿಲ್ಲ ಎಂದೆನಿಸಿ ಪೂರ್ಣಿಮಾಳಿಗೆ ಬೇಸರವಾಗಿ “ಸರಿ ಲೋಕಿ ನಾ ಬರ್ತೀನಿ” ಎಂದ್ಹೇಳಿ ಮೇಲೆದ್ದಳು.
“ಇನ್ಯಾವುದೋ ಮುಖ್ಯ ವಿಷಯ ಅಂತಂದೆ”
“ಹೌದಲ್ಲಾ! ಮರೆತೇಬಿಟ್ಟಿದ್ದೆ” ಪೂರ್ಣಿಮಾ ಮತ್ತೆ ಕುಳಿತಳು. “ಆ ಗೌತಮ್ ಇದ್ದಾನಲ್ಲಾ, ಆತ ನಿನ್ನೆ ನಮ್ಮ ಸಿಂಚನಾಗೆ ಲವ್ ಲೆಟರ್ ಕೊಟ್ಟಿದ್ದಾನೆ”
“ಹೌದಾ. ಸಿಂಚನಾ ಏನೆಂದಳು”
“ಅವಳೀಗಾಗಲೇ ಒಬ್ಬನನ್ನು ಪ್ರೀತಿಸುತ್ತಿದ್ದಾಳೆ. ಅವಳ ಅತ್ತೆ ಮಗನೇ ವಿವೇಕ್ ಅಂತ. ಇವತ್ತು ಮಧ್ಯಾಹ್ನ ಕ್ಯಾಂಟೀನಿನಲ್ಲಿ ಗೌತಮನನ್ನು ಭೇಟಿಯಾಗಿ ಎಲ್ಲಾ ವಿಷಯ ತಿಳಿಸಿ ಸಾರಿ ಅಂದಳು”
“ಅದಕ್ಕೆ ಗೌತಮ್ ಏನಂದ?”
“ಏನೂ ಹೇಳಲಿಲ್ಲ, ಹೊರಟುಹೋದ. ನಾಳೆ ಏನಾದರೂ ಹೇಳ್ತಾನೇನೋ ನೋಡ್ಬೇಕು. ಸರಿ ಲೋಕಿ ನಾನಿನ್ನು ಬರ್ತೀನಿ” ಎಂದ್ಹೇಳಿ ಪೂರ್ಣಿಮಾ ಹೊರಟುಹೋದಳು.
ಲೋಕಿ ಮತ್ತೊಂದು ಕಾಫಿ ತರಲು ಹೇಳಿದ. ‘ಸಿಂಚನಾ’! ನಿಜಕ್ಕೂ ತುಂಬಾ ಲಕ್ಷಣವಾಗಿದ್ದಾಳೆ. ಒಳ್ಳೆ ಹುಡುಗಿ. ಗೌತಮ್ ಕೂಡ ಚೆಂದ ಇದ್ದಾನೆ. ಮೇಲಾಗಿ ಪ್ರತಿಭಾವಂತ. ಇಬ್ಬರೂ ತುಂಬಾ ಆಪ್ತ ಸ್ನೇಹಿತರಾಗಿದ್ದರು. ಬಹುಶಃ ಆತ ಸಿಂಚನಾಳನ್ನು ಮೊದಲಿನಿಂದ ಪ್ರೀತಿಸುತ್ತಿದ್ದ ಎಂದು ಕಾಣುತ್ತೆ. ಇವಾಗ ಆ ಪ್ರೀತಿ ವ್ಯಕ್ತಪಡಿಸಿದ್ದಾನೆ. ಸಿಂಚನಾ ಒಪ್ಪಿಲ್ಲ. ನಾಳೆಯಿಂದ ಅವರಿಬ್ಬರ ಸ್ನೇಹ ಮೊದಲಿನಂತಿರುತ್ತಾ? ಸಾಧ್ಯವೇ ಇಲ್ಲವೇನೋ? ಅಕಸ್ಮಾತ್ ನಾನು ಪೂರ್ಣಿಗೆ ನಾನವಳನ್ನು ಪ್ರೀತಿಸುತ್ತಿರುವ ವಿಷಯ ತಿಳಿಸಿದರೆ ಆಕೆ ಕೂಡ ತಿರಸ್ಕರಿಸಿಬಿಡುತ್ತಾಳಾ? ಮೊದಲು ಪೂರ್ಣಿ ಯಾರನ್ನೂ ಪ್ರೀತಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅಷ್ಟಕ್ಕೂ ನಾನವಳನ್ನು ಪ್ರೀತಿಸುತ್ತಿದ್ದೀನಾ? ಇನ್ನೂ ಅದನ್ನೇ ನಿರ್ಧರಿಸಲಾಗಿಲ್ಲ, ಮುಂದಿನದನ್ನೆಲ್ಲಾ ಯಾಕೆ ಯೋಚಿಸಬೇಕಲ್ವಾ?. ಕಾಫಿ ಬಂತು. ಕಾಫಿ ಕುಡಿದು ಹಣ ನೀಡಿ ಹೊರಬಂದ.
ಹೊರಗಡೆ ಗೃಂಥಾಲಯದಲ್ಲಿದ್ದ ಆ ಇಬ್ಬರು ನಿಂತಿದ್ದರು. ಸಣಕಲು ವ್ಯಕ್ತಿ ಈತನ ಬಳಿ ಬಂದು “ಇವತ್ತು ಸಂಜೆ ಆರು ಘಂಟೆಗೆ ನೀನು ಮಾಮೂಲಾಗಿ ಕೂರೋ ಮಹಾರಾಜ ಪದವಿ ಪೂರ್ವ ಕಾಲೇಜಿನಲ್ಲಿರೋ ಬ್ಯಾಸ್ಕೆಟ್ ಬಾಲ್ ಗ್ರೌಂಡಿಗೆ ಬಾ” ಎಂದು ಅವಸರದಲ್ಲಿ ಹೇಳಿ ಹೊರಟುಹೋದ. ಅವನ ಹಿಂದಿಯೇ ಇನ್ನೊಬ್ಬನೂ ಹೊರಟುಹೋದ.
‘ಇವರ್ಯಾರು? ನನ್ನ ಬಗ್ಗೆ ಇಷ್ಟೊಂದು ವಿಷಯ ಯಾಕೆ ತಿಳಿದುಕೊಂಡಿದ್ದಾರೆ. ಆ ಹುಚ್ಚನನ್ನು, ಈ ಇಬ್ಬರನ್ನೂ ನೋಡಿದರೆ ಯಾವುದೋ ಕ್ರಾಂತಿಕಾರಿ ಸಂಘಟನೆಗೆ ಸೇರಿದವರಂತೆ ಕಾಣುತ್ತಾರೆ. ಅದು ನನ್ನ ಕಲ್ಪನೆಯೂ ಇರಬಹುದು. ಕ್ರಾಂತಿಕಾರಿ ಎಂದರೆ ಮುಖದಲ್ಲಿ ನಗುವಿಲ್ಲದೆ ಗಂಭೀರವದನರಾಗಿಯೇ ಇರಬೇಕೆಂಬ ಭಾವ ನನ್ನ ಮನಸ್ಸಿನಲ್ಲಿ. ಹಾಗಾಗಿ ಇವರೂ ಕ್ರಾಂತಿಕಾರಿಗಳೆಂದು ಕಾಣಿಸುತ್ತಿರಬೇಕಷ್ಟೇ. ಅಕಸ್ಮಾತ್ ಇವರು ಕ್ರಾಂತಿಕಾರಿ ಮನೋಭಾವದವರೇ ಆಗಿದ್ದರೆ? ಈ ದೇಶದಲ್ಲಿರೋ ಪರಿಸ್ಥಿತಿಯ ಬಗ್ಗೆ ಸಿಟ್ಟು ಮೊದಲಿನಿಂದಲೂ ಇದೆ. ಭೃಷ್ಟಾಚಾರ, ಲಂಚಕೋರತನದಿಂದ ತುಂಬಿರೋ ಈ ಸಮಾಜವನ್ನು ಸರಿಮಾಡಲು ಬಹುದೊಡ್ಡ ಕ್ರಾಂತಿಯೇ ಆಗಬೇಕು. ಸತ್ಯಾಗ್ರಹ ಎಷ್ಟೇ ಶಕ್ತಿಯುತವಾದುದೆಂದು ತೋರಿದರೂ ಯಾಕೋ ಇವತ್ತಿನ ದಿನಮಾನದಲ್ಲಿ ಸತ್ಯಾಗ್ರಹ ಪತ್ರಿಕೆಗೊಂದು ಫೋಟೋ ಆಗುವುದಕ್ಕೆ ಸೀಮಿತವಾಗುತ್ತಿದೆಯೇ ಹೊರತು ಬದಲಾವಣೆಯ ಹರಿಕಾರನಾಗುತ್ತಿಲ್ಲ. ಸತ್ಯಾಗ್ರಹವೆಂಬುದು ಉದ್ದೇಶ ಈಡೇರುವವರೆಗೆ ನಡೆಸುವ ಹೋರಾಟವಾಗದೆ ಪತ್ರಿಕೆಯವರು ಬಂದು ಫೋಟೋ ತೆಗೆಯುವವರೆಗೆ ಮಾತ್ರ ನಡೆಸುವ ಒಂದು ಪ್ರದರ್ಶನವಾಗಿಬಿಟ್ಟಿದೆ. ದೇಶದ ಪರಿಸ್ಥಿತಿಯ ಸುಧಾರಣೆಗೆ ಈಗಿರುವ ಆಡಳಿತವನ್ನು ಅಧಿಕಾರದ ರೂಪವನ್ನು ಸಂಪೂರ್ಣವಾಗಿ ಕಿತ್ತೊಗೆಯುವುದರಿಂದಷ್ಟೇ ಸಾಧ್ಯ. ಸಂಪೂರ್ಣ ಕಿತ್ತೊಗೆಯಲು ಶಸ್ತ್ರಾಸ್ತ್ರ ಹೋರಾಟವೇ ದಾರಿ. ಬಂದೂಕು ಹಿಡಿಯಬೇಕು, ನಾನೊಬ್ಬ ಬಂದೂಕು ಹಿಡಿದು ಅವರಿವರನ್ನು ಕೊಲ್ಲುತ್ತಾ ಸಾಗಿದರೆ ಕ್ರಾಂತಿಯಾಗಿಬಿಡುತ್ತದಾ? ಉಹ್ಞೂ...ಬಂದೂಕು ಸಾಯಿಸುವುದಕ್ಕಲ್ಲ ಬದಲಾವಣೆಗೆ. ಈಗಾಗಲೇ ಸರ್ಕಾರದ ದುರಾಡಳಿತದ ವಿರುದ್ಧ ಶಸ್ತ್ರಾಸ್ತ್ರಗಳನ್ನಿಡಿದು ಹೋರಾಡುತ್ತಿರುವ, ನಿಜವಾಗಲೂ ಜನಪರವಾಗಿ ಕೆಲಸ ಮಾಡೋ ಒಂದು ಸಂಘಟನೆಯನ್ನು ಸೇರಿ ನಾನು ಈ ವ್ಯವಸ್ಥೆಯಲ್ಲಿರೋ ಹುಳುಕುಗಳ ವಿರುದ್ಧ ಹೋರಾಡಬೇಕು ಎಂದು ಬಹಳ ಬಾರಿ ಅನ್ನಿಸಿತ್ತು. ಆದರೆ ಅಂತಹ ಸಂಘಟನೆಗಳಿಗೆ ಸೇರುವುದು ಹೇಗೆ ಎಂಬುದು ತಿಳಿದಿರಲಿಲ್ಲ. ಬಹುಶಃ ಇವತ್ತು ಆ ರೀತಿಯ ಅವಕಾಶ ಸಿಗುತ್ತದಾ?’ ಯೋಚನೆಗಳ ನಡುವೆ ಮನೆ ದಾರಿ ಸವೆದಿದ್ದೇ ತಿಳಿಯಲಿಲ್ಲ.
ಸಂಜೆ ಆರು ಘಂಟೆ. ಬೆಳಗಿನಿಂದ ಕೆಲಸ ಮಾಡಿ ಆಯಾಸಗೊಂಡಂತೆ ಕಾಣುತ್ತಿದ್ದ ಸೂರ್ಯ ತನ್ನ ಮನೆಯ ದಾರಿ ಹಿಡಿದಿದ್ದ. ಬ್ಯಾಸ್ಕೆಟ್ ಬಾಲ್ ಗ್ರೌಂಡಿನಲ್ಲಿ ಸ್ಕೇಟಿಂಗ್ ಮಾಡುತ್ತಿದ್ದ ಚಿಣ್ಣರು ಮನೆಗೆ ಹೋಗುವ ಸಮಯವಾದ್ದರಿಂದ ಕಾಲಿಗೆ ಕಟ್ಟಿಕೊಂಡಿದ್ದ ಗಾಲಿಗಳನ್ನು ಬಿಚ್ಚುತ್ತಿದ್ದರು.
‘ಜೀವನದಲ್ಲಿ ಇವತ್ತು ಮಹತ್ವವಾದ ದಿನ’ ಎಂಬುದು ತಿಳಿದಿದ್ದ ಲೋಕಿ ಉತ್ಸಾಹದಿಂದ ಗ್ರೌಂಡಿಗೆ ಬಂದು ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತ. ಗಡಿಯಾರ ನೋಡಿದ, ಆರು ಘಂಟೆಯಾಗಿ ಎರಡು ನಿಮಿಷಗಳಾಗಿದ್ದವು. ಸುತ್ತಮುತ್ತ ನೋಡಿದ ಆ ‘ಹುಚ್ಚ’ನಾಗಲೀ ಆ ಇಬ್ಬರು ವ್ಯಕ್ತಿಗಳಾಗಲೀ ಅಲ್ಲಿ ಕಾಣಲಿಲ್ಲ. ಲೋಕಿಯ ಪಕ್ಕದಲ್ಲಿ ಮೂವತ್ತರ ಆಸುಪಾಸಿನ ಮಹಿಳೆಯೊಬ್ಬಳು ಬಂದು ಕುಳಿತಳು. ‘ಎಲ್ಲೂ ಜಾಗವಿಲ್ಲವೆಂಬಂತೆ ಈಕೆ ಇಲ್ಲೇ ಬಂದು ಕೂರಬೇಕೆ?’ ಎಂದುಕೊಂಡು ಲೋಕಿ ಮೇಲೆದ್ದ.

ಮುಂದುವರೆಯುವುದು....

No comments:

Post a Comment